ಕರ್ಪೂರದ ಮರ

ಲಾರೇಸೀ ಕುಟುಂಬಕ್ಕೆ ಸೇರಿದ ಸಿನಮೋಮಮ್ ಕ್ಯಾಂಪೊರ ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ದೊಡ್ಡ ಮರ. ಇದು ಚೈನಾ, ಜಪಾನ್ ಮತ್ತು ಫಾರ್ಮೋಸಗಳ ಮೂಲವಾಸಿ. ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಈಚೆಗೆ ಇದನ್ನು ಬೆಳೆಸಲಾಗುತ್ತಿದೆ. ಇದು ತನ್ನ ಮೂಲ ನಾಡಿನಲ್ಲಿ ಬೆಳೆಯುವ ಎತ್ತರ ಸುಮಾರು 100', ಬುಡದ ಸುತ್ತಳತೆ 6'-8' ಭಾರತದಲ್ಲಿ ಇದು ಅಷ್ಟು ಎತ್ತರಕ್ಕೆ ಬೆಳೆಯುತ್ತಿಲ್ಲ. 50'-60' ಎತ್ತರಕ್ಕೆ ಬೆಳೆದರೆ ಅದೇ ದೊಡ್ಡದು. ಎಲೆಗಳ ಉದ್ದ 2"-4" ಅವಕ್ಕೆ ಹೊಳಪು ಹಾಗೂ ತೀಕ್ಷ್ಣ ವಾಸನೆ (ಆರೋಮಾ) ಇವೆ. ಫೆಬ್ರುವರಿ ಮಾರ್ಚಿ ತಿಂಗಳಲ್ಲಿ ಎಲೆಗಳು ಉದುರಿದರೂ ಜೊತೆಯಲ್ಲಿ ಹೊಸ ಎಲೆಗಳು ಮೂಡುತ್ತವೆ. 0.3" ದಪ್ಪವಾಗಿರುವ ಇದರ ಹಣ್ಣುಗಳು ತೀವ್ರ ಹಸುರು ಬಣ್ಣವಾಗಿದ್ದು ಅಂಡಾಕಾರವಾಗಿವೆ. ಮಾಗಿದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. 25 ವರ್ಷ ವಯಸ್ಸಿನ ಮರಗಳು ಉತ್ಪತ್ತಿಮಾಡುವ ಜೀಜಗಳಿಗೆ ಮಾತ್ರ ಪುನರುತ್ಪತ್ತಿ ಶಕ್ತಿ ಇದೆ. 

(ಎ.ಕೆ.ಎಸ್.)

ಕರ್ಪೂರದ ಮರಗಳಲ್ಲಿ ಅನೇಕ ವಿಧಗಳುಂಟು. ಇವುಗಳಲ್ಲಿ ಕೆಲವನ್ನು ಮಾತ್ರ ಕರ್ಪೂರವನ್ನು ಉತ್ಪತ್ತಿ ಮಾಡಲು ಬಳಸುವರು. ಮಿಕ್ಕವು ತೀಕ್ಷ್ಣವಾಸನೆಯ ತೈಲವನ್ನು ಮಾತ್ರ ನೀಡಬಲ್ಲವು. ಹಲವರು ಇವೆಲ್ಲ ಬೇರೆ ಬೇರೆ ಪ್ರಭೇದಗಳೆಂದು ವಾದಿಸುವರಾದರೂ ಅವೆಲ್ಲ ಒಂದೇ ಪ್ರಭೇದಕ್ಕೆ ಸೇರಿದವೆಂದು ಈಚಿನ ಅಭಿಪ್ರಾಯ. ಮಾರಿಷಸ್ ದ್ವೀಪದಲ್ಲಿ ಬೆಳೆಯುವ ಸಿನಮೋಮಮ್ ಕಾಂಫೊರದ ಮರದಿಂದ ಮಾತ್ರ ಕರ್ಪೂರವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಆ ಗಿಡದ ಬೇರೆ ಬೇರೆ ಭಾಗಗಳಲ್ಲಿರುವ ತೈಲಕೋಶಗಳಲ್ಲಿ ಕರ್ಪೂರ ಸಂಗ್ರಹವಾಗಿರುತ್ತದೆ. ಸಸ್ಯದ ಜೀವನದ ಆರಂಭ ಕಾಲದಲ್ಲಿ ಅದು ಎಲೆಗಳಲ್ಲಿ ಹಳದಿ ತೈಲದೋಪಾದಿಯಲ್ಲಿ ಸಂಗ್ರಹವಾಗಲು ಆರಂಭಿಸಿ ಆ ತೈಲ ಕಾಲಕ್ರಮದಲ್ಲಿ ವರ್ಣರಹಿತವಾಗಿ ಕರ್ಪೂರದ ಕಣಗಳಾಗಿ ಸಸ್ಯದ ಇತರ ಭಾಗಗಳಿಗೆಲ್ಲ ಸಾಗಿಹೋಗುತ್ತದೆ. ಬೇರಿನಲ್ಲಿ ಅದು ಅತ್ಯಂತ ಹೆಚ್ಚಾಗಿ ಸಂಗ್ರಹವಾಗಿರುತ್ತದೆ. ಹಾಗೆ ಸಂಗ್ರಹವಾಗಿರುವ ಬಲಿತ ಮರದ ಭಾಗಗಳನ್ನು ಕಾಸಿಬಟ್ಟಿಯಿಳಿಸಿ ಕರ್ಪೂರವನ್ನು ತಯಾರಿಸುವರು (ನೋಡಿ- ಕರ್ಪೂರ). ಎಲೆಗಳನ್ನೊಳಗೊಂಡ ಕೊಂಬೆಗಳನ್ನು ಕಾಸಿ ಬಟ್ಟಿಯಿಳಿಸುವುದು ಅಮೆರಿಕದಲ್ಲಿ ಅಭ್ಯಾಸದಲ್ಲಿದೆ. ಚಿಗುರೆಲೆಗಳು ಹಳೆಯ ಎಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕರ್ಪೂರವನ್ನು ನೀಡುತ್ತವೆ.

ಭಾರತದಲ್ಲಿ ಕರ್ಪೂರದ ಉತ್ಪಾದನೆ : ನೀಲಗಿರಿ, ಡೆಹರಾಡೂನ್, ಸಹರಾನ್‍ಪುರ, ಕಲ್ಕತ್ತ, ಕೊಚಿನ್ ಮುಂತಾದೆಡೆಗಳಲ್ಲಿ ಕರ್ಪೂರದ ಮರಗಳನ್ನು ಬೆಳೆಸಲಾಗುತ್ತಿದೆ. ಕೊಚಿನ್ ಪ್ರದೇಶದಲ್ಲಿ ಬೆಳೆಯುವ ಮರಗಳು, ಭಾರತದಲ್ಲೆಲ್ಲ ಹೆಚ್ಚಿನ ಪ್ರಮಾಣದ ಕರ್ಪೂರವನ್ನು ಒದಗಿಸುತ್ತವೆ. ಆದರೂ ಅಮೆರಿಕ, ಆಲ್ಜೀರಿಯ, ಸಿಂಹಳ ಮುಂತಾದ ದೇಶಗಳ ಮರಗಳು ನೀಡುವ ಕರ್ಪೂರದ ಪ್ರಮಾಣದೊಡನೆ ಹೋಲಿಸಿದರೆ ಇದು ತೀರಾ ಕಡಿಮೆಯೆನ್ನಬೇಕು. ಈಚೆಗೆ ಕರ್ಪೂರವನ್ನು ಡಿ-ಪೈನೀನ್ ಎಂಬ ವಸ್ತುವನ್ನು ಬಳಸಿ ಕೃತಕ ಸಂಶ್ಲೇಷಣ ವಿಧಾನದಿಂದ ತಯಾರಿಸುವುದು ಆರಂಭವಾಗಿ ಇಂಗ್ಲೆಂಡು ಮತ್ತು ಅಮೆರಿಕಗಳಲ್ಲಿ ಅದರ ಉತ್ಪಾದನೆ ಭಾರಿ ಉದ್ಯೋಗವಾಗಿ ಬೆಳೆದಿದೆ. ಹೀಗೆ ತಯಾರಿಸಿದ ಕರ್ಪೂರವನ್ನು ಸ್ಫೋಟಕಗಳ ತಯಾರಿಕೆಯಲ್ಲೂ ಕ್ರಿಮಿನಾಶಕಗಳ ಮತ್ತು ಇತರ ರಾಸಾಯನಿಕ ವಸ್ತುಗಳ ನಿರ್ಮಾಣದಲ್ಲೂ ಬಳಸಲಾಗುತ್ತಿದೆ.

ಭಾರತೀಯ ಧರ್ಮ, ಸಂಸ್ಕøತಿಗಳಲ್ಲಿ ಕರ್ಪೂರ ಹಾಸುಹೊಕ್ಕಾಗಿ ಹೆಣೆದುಕೊಂಡು ಬಂದಿದೆ. ಅದನ್ನು ಶುಭಕಾರ್ಯಗಳಲ್ಲಿ ಮಂಗಳದ್ರವ್ಯವಾಗಿ ಬಳಸುವುರು. ಬಗೆ ಬಗೆಯ ಚಿಕಿತ್ಸೆಗಳಲ್ಲೂ ಇದರ ಉಪಯೋಗ ಉಂಟು. ಹೊರ ನರಮಂಡಲದ ಮೇಲೆ ಅದು ಚೌಗು ಹಿಡಿಸಬಲ್ಲುದಾದ್ದರಿಂದ ಕೆಲವು ಚರ್ಮರೋಗಗಳಲ್ಲಿ ಅದನ್ನು ಹಚ್ಚುವುದುಂಟು. ಸೋಂಕುನಿವಾರಕವಾಗಿಯೂ ಅದನ್ನು ಬಳಸುವರು. ಮಾರ್ಫೀನ್ ಅಥವಾ ಇತರ ಮದ್ದುಗಳಿಂದ ಶ್ವಾಸ ಮಂದಗತಿಗಿಳಿದಾಗ ಶ್ವಾಸವನ್ನು ತೀವ್ರಗೊಳಿಸಲು ಸಣ್ಣ ಪ್ರಮಾಣದಲ್ಲಿ ಔಷಧಿಯಾಗಿ ತಿನ್ನುವರು. ಹೃದಯಕ್ರಿಯೆಯನ್ನು ಚುರುಕುಗೊಳಿಸುವುದಕ್ಕೂ ಮಯೋಕಾರ್ಡೈಟ್ ರೋಗನಿವಾರಣೆಗೂ ಅದನ್ನು ಸೇವಿಸುವುದುಂಟು. ಕೆಲವು ರೀತಿಯ ಉನ್ಮಾದಗಳಿಗೂ ತೀವ್ರ ರೀತಿಯ ಆಮಶಂಕೆಗೂ ಔಷಧಿಯಾಗಿ ಬಳಸುವರು. ಕರ್ಪೂರವನ್ನು ಚರ್ಮದ ತುರುಚನ್ನು ನಿವಾರಿಸಲು ಬಾಹ್ಯ ಲೇಪನಕ್ಕಾಗಿ ಬಳಸುವುದು ಹೆಚ್ಚು. ಉರಿಯೂತ, ಕೀಲು ಮತ್ತು ಸ್ನಾಯುಗಳ ವಾಯು ಇತ್ಯಾದಿಗಳ ನಿವಾರಣೆಗೂ ಹಚ್ಚುವರು. ಆದರೆ ಅದರ ಸೇವನೆ ಅತಿಯಾದರೆ ವಿಷವಾಗಿ ಪರಿಣಮಿಸುವುದು. ಆದರಿಂದ ಸೆಳವು, ತಲೆ ಸುತ್ತುವುದು, ಮನಸ್ಸಿನ ಕ್ಷೋಭೆ, ಚಿತ್ತಭ್ರಮಣ ಇತ್ಯಾದಿ ವಿಕಾರಗಳು ಉಂಟಾಗಬಹುದು. ಸಾವು ಸಂಭವಿಸುವುದು ವಿರಳ.

ಅಂಗಡಿಯಲ್ಲಿ ಮಾರುವ ಕರ್ಪೂರದ ತೈಲವೆಂಬುದು ಈ ಮರದಿಂದ ಕರ್ಪೂರವನ್ನು ತೆಗೆದು ಮೇಲೆ ಉಳಿಯುವ ದ್ರವ. ಇದರಿಂದ ವಿವಿಧ ಸುಗಂಧದ್ರವ್ಯಗಳನ್ನು ತಯಾರಿಸುವರು. ಕರ್ಪೂರದ ಬೀಜಗಳಿಂದ ಕೊಬರಿಯೆಣ್ಣೆಯಂಥ ಒಂದು ತೈಲವನ್ನು ಉತ್ಪತ್ತಿಮಾಡುವರು. ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸುವರು.

ಕಂದುಮಿಶ್ರಿತ ಹಳದಿ ಬಣ್ಣದ ಕರ್ಪೂರದ ಮರ ದೀರ್ಘಕಾಲ ಗಂಧಯುಕ್ತವಾಗುಳಿಯಬಲ್ಲುದಾದ್ದರಿಂದ ಅದನ್ನು ಕೆಲವು ಅಲಂಕಾರದ ಉಪಕರಣಗಳ ತಯಾರಿಕೆಯಲ್ಲಿ ಬಳಸುವರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ